ಕೃಷಿ ಕ್ಷೇತ್ರದಲ್ಲಿ ಕಾಲದಿಂದ ಕಾಲಕ್ಕೆ ಆಗಿರುವ ಮಾರ್ಪಾಡುಗಳ ವಿವರಗಳು ಇಲ್ಲಿವೆ. == ಇತಿಹಾಸ == ಈಗ ಬೇಸಾಯದಲ್ಲಿ ರೂಢಿಯಲ್ಲಿರುವ ಅನೇಕ ಸಾಮಾನ್ಯ ವಿಷಯಗಳನ್ನು ಕಂಡುಕೊಳ್ಳಲು ಆದಿಮಾನವನಿಗೆ ಅಪಾರವಾದ ಕಾಲ ಮತ್ತು ಶ್ರಮ ಹಿಡಿದಿರಬೇಕು. ಉದಾಹರಣೆಗಾಗಿ, ಉಳುಮೆಯನ್ನೆ ತೆಗೆದುಕೊಂಡರೆ ಮೊಟ್ಟಮೊದಲು ನೆಲ ಸಡಿಲಮಾಡಿ ಬೀಜ ಬಿತ್ತುವುದಕ್ಕೆ ಮೊನಚಾದ ಕಲ್ಲನ್ನೋ ಅಥವಾ ಮರವನ್ನೋ ಬಳಸಿರಬೇಕು. ಅನಂತರ ಕಬ್ಬಿಣದ ಆಯುಧಗಳಾದ ಸಲಾಕಿ ಗುದ್ದಲಿಯಂಥ ಉಪಕರಣಗಳು ಉಪಯೋಗಕ್ಕೆ ಬಂದಿರಬಹುದು. ಮುಂದಿನ ಹೆಜ್ಜೆ ಮನುಷ್ಯನಿಂದ ಎಳೆಯಲ್ಪಟ್ಟ ನೇಗಿಲಿನಂಥ ಸಜ್ಜು; ಈ ಶ್ರಮಕ್ಕೆ ಕುದುರೆ ಎತ್ತು ಮತ್ತಿತರ ಪ್ರಾಣಿಗಳ ಬಳಕೆ; ನೇಗಿಲಿನ ಗುಳ ಮರ ಇವುಗಳ ಸುಧಾರಣೆ; ಪ್ರಾಣಿಗಳಿಗೆ ಬದಲಾಗಿ ಸ್ವಯಂಚಾಲಕ ಯಂತ್ರಗಳ ಬಳಕೆ; ಹೀಗೆ ಬೆಳೆದು ಬಂದಿದೆ. ಈ ರೀತಿ ಕೃಷಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳು ಕಳೆದ 20 ಸಾವಿರ ವರ್ಷಗಳಲ್ಲಿ ಹಲವಾರು ತಲೆಮಾರಿನ ಜನರ ಚಿಂತನೆ, ಅನುಭವ ಇವುಗಳಿಂದ ಹೊರಹೊಮ್ಮಿ ಈಗಿನ ಕೃಷಿಶಾಸ್ತ್ರ ಅಸ್ತಿತ್ವಕ್ಕೆ ಬಂದಿದೆ. ಪುರಾತನ ಮಾನವ ತನ್ನ ಬೆಳೆ ಅಧಿಕಗೊಳಿಸುವುದಕ್ಕೆ ನಾವು ಈಗ ಬಳಸುವ ಅನೇಕ ಕ್ರಮಗಳನ್ನು ಅನುಸರಿಸುತ್ತಿದ್ದುದು ಗತಸಂಸ್ಕøತಿಯ ಪರಿಶೀಲನೆಯಿಂದ ತಿಳಿದುಬರುತ್ತದೆ. ಗೊಬ್ಬರ, ಸುಣ್ಣ, ಧಾನ್ಯ ಬೆಳೆಗಳ ಮಧ್ಯೆ ದ್ವಿದಳ ಬೆಳೆಗಳ ಪರಿವರ್ತನೆ ಮುಂತಾದ ಕ್ರಮಗಳು ವ್ಯಾಪಕವಾಗಿ ಈಜಿಪ್ಟ್, ರೋಮ್, ಸಿಂಧೂ ಬಯಲಿನ ಪುರಾತನ ಸಂಸ್ಕøತಿಗಳ ಕೃಷಿಯಲ್ಲಿ ಬಳಕೆಯಲ್ಲಿದ್ದುವು. ಭಾರತದಂತೆ ಉಳಿದ ದೇಶಗಳಲ್ಲೂ ಈ ಕೃಷಿಜ್ಞಾನ ತಂದೆಯಿಂದ ಮಕ್ಕಳಿಗೆ ಅನೂಚಾನವಾಗಿ ಬೆಳೆದು ಬಂದಿದೆ. ಈಗ 2,000 ವರ್ಷಗಳ ಹಿಂದೆ ರೋಮನ್ ರಾಜ್ಯದಲ್ಲಿ ಕೊಲುಮೆಲ್ಲಾ ಎಂಬಾತ ಬರೆದ ಕೃಷಿ ಕೈಪಿಡಿ ಬಹುಕಾಲ ಜನಪ್ರಿಯವಾಗಿತ್ತಂತೆ. ಇಂದು ಬಳಕೆಯಲ್ಲಿರುವ ಕೃಷಿಕ್ರಮಗಳ ಪ್ರಸ್ತಾಪ ಇದರಲ್ಲಿದೆ. ಭಾರತದಲ್ಲಿ ನೀರಾವರಿ ಬೇಸಾಯ ಬಹಳ ಹಿಂದಿನಿಂದ ಜಾರಿಯಲ್ಲಿದೆ. ಅನೇಕ ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಕೃಷಿ ವಿಷಯಗಳ ಪ್ರಸ್ತಾಪವಿದೆ. == ಸ್ಪೇನ್ ದೇಶ == ಸ್ಪೇನ್ ದೇಶದಲ್ಲಿ 12ನೆಯ ಶತಮಾನದಲ್ಲಿ ಇಬ್ನ್-ಏಲ್-ಎವಾನ್ ಎಂಬ ಪಂಡಿತ ಒಂದು ಕೃಷಿಗ್ರಂಥ ಬರೆದ. ಅದರಲ್ಲಿ ಸೂಚಿಸಿದ ಅನೇಕ ಬೇಸಾಯ ಕ್ರಮಗಳು ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ವಲಸೆ ಬಂದು ನೆಲೆಸಿದ ಸ್ಪ್ಯಾನಿಷ್ ಜನಗಳ ಮೂಲಕ ಅಮೆರಿಕದ ಬೇಸಾಯದ ಮೇಲೆ ಹೆಚ್ಚು ಪರಿಣಾಮವನ್ನುಂಟು ಮಾಡಿದವು. 1635ರಲ್ಲಿ ವಾನ್ ಹೆಲ್ಮಾಂಟ್ ಎಂಬ ವಿಜ್ಞಾನಿ ಒಂದು ಕುಂಡದಲ್ಲಿ 200 ಪೌಂಡ್ ಒಣಗಿದ ಮಣ್ಣನ್ನು ತುಂಬಿ ಒಂದು ವಿಲೋ (ನೀರು ಹಬ್ಬೆ) ಮರದ ಸಸಿಯನ್ನು ನೆಟ್ಟು 5 ವರ್ಷ ಕೇವಲ ಮಳೆನೀರನ್ನಷ್ಟೇ ಉಣಿಸಿ ಬೆಳೆಸಿದ. ಆಮೇಲೆ ಅದನ್ನು ಕತ್ತರಿಸಿ ತೂಗಿದಾಗ ಅದರ ತೂಕ 165 ಪೌಂಡ್ ಇತ್ತು. ಕುಂಡದಲ್ಲಿನ ಮಣ್ಣನ್ನು ಒಣಗಿಸಿ ತೂಗಿದಾಗ ಕೇವಲ 2 ಔನ್ಸ್ ತೂಕ ಮಾತ್ರ ಕಡಿಮೆಯಾಗಿದ್ದುದು ಕಂಡುಬಂತು. ಈ ಪ್ರಯೋಗಾಧಾರದ ಮೇಲೆ ಅವನು ಸಸ್ಯ ಬೆಳವಣಿಗೆಗೆ ನೀರಷ್ಟೇ ಸಾಕು ಎಂಬ ಅಭಿಮತಕ್ಕೆ ಬಂದ. ಪ್ರಸ್ತುತ ನಮಗೆ ತಿಳಿದಿರುವಂತೆ ಇದು ಸರಿಯಲ್ಲ. ಸಸ್ಯದ ಬಹುಭಾಗದ ವಸ್ತು ಗಾಳಿ ಮತ್ತು ನೀರಿನಿಂದೊದಗುವ ಇಂಗಾಲ ಆಮ್ಲ ಮತ್ತು ಜಲಜನಕಗಳಿಂದಾದುದು. ಆದರೆ ಇದರ ಜೊತೆಗೆ ಕಡಿಮೆ ಪ್ರಮಾಣದಲ್ಲಿ ಇತರ ಮೂಲವಸ್ತುಗಳು ಸಸ್ಯ ಬೆಳವಣಿಗೆಗೆ ಅತ್ಯಾವಶ್ಯಕ. == ಆಧುನಿಕ ಕಾಲ == ಬೇಸಾಯದ ವಿಷಯದಲ್ಲಿ ಒಂದು ಶಾಸ್ತ್ರೀಯ ದೃಷ್ಟಿ ತಲೆದೋರಿದ್ದು 18ನೆಯ ಶತಮಾನದ ಕೊನೆಯಲ್ಲಿ. ಅದು ರಸಾಯನಶಾಸ್ತ್ರದ ವೇಗೋತ್ಕರ್ಷಿತ ಮುನ್ನಡೆಯ ನೇರ ಫಲ. ಸಸ್ಯಗಳ ದ್ಯುತಿಸಂಶ್ಲೇಷಣ ಕ್ರಿಯೆಯಲ್ಲಿ ಇಂಗಾಲಾಮ್ಲ, ಜಲಜನಕಗಳ ಪಾತ್ರವನ್ನು ಕುರಿತು ಕೆಲವು ವಿಷಯಗಳು ಆಗ ತಿಳಿದು ಬಂದುವು. ಅಲ್ಲಿಂದ ಅನೇಕ ಪ್ರಯೋಗಗಳು ನಡೆದು ರಾಸಾಯನಿಕ ವಿಶ್ಲೇಷಣ ಕ್ರಮಗಳು ವ್ಯಾಪಕವಾಗಿ ಬಳಕೆಗೆ ಬಂದುವು. ಇದರಿಂದ ಪದಾರ್ಥಗಳ ನಿಜಸ್ವರೂಪ ತಿಳಿದು ಸಸ್ಯ ಬೆಳವಣಿಗೆಯ ವಿಚಾರದಲ್ಲಿ ಬೆಳೆದು ಬಂದಿದ್ದ ಕುರುಡು ನಂಬಿಕೆಗಳು ಕಳೆದು ಮಣ್ಣು ಮತ್ತು ಸಸ್ಯರಚನೆಯ ಸಂಬಂಧವಾದ ಹಲವಾರು ನಿಖರವಾದ ವಿಷಯಗಳು ತಿಳಿಯುವಂತಾಯ್ತು. ಇವೆಲ್ಲವುಗಳ ಆಧಾರದ ಮೇಲೆ 19ನೆಯ ಶತಮಾನದ ಮೊದಲಿನ ಅರ್ಧದಲ್ಲಿ ಲೀಬಿಗ್ ಎಂಬ ಜರ್ಮನ್ ವಿಜ್ಞಾನಿ ಸಸ್ಯ ಬೆಳವಣಿಗೆಯ ವಿಷಯವಾಗಿ ಪ್ರಭಾವಶಾಲಿಯಾದ ಪ್ರತಿಪಾದನೆಗಳನ್ನು ಜನಗಳ ಮುಂದಿಟ್ಟ. ಇದೇ ಸಮಯದಲ್ಲಿ ಇಂಗ್ಲೆಂಡಿನಲ್ಲಿ ಲಾಸ್ ಮತ್ತು ಗಿಲ್ಬರ್ಟ್ ಎಂಬ ವಿಜ್ಞಾನಿಗಳ ಶ್ರಮದಿಂದ ವಿಶ್ವವಿಖ್ಯಾತಿ ಹೊಂದಿರುವ ರೋತನ್‍ಸ್ಟೆಡ್ ಕೃಷಿ ಪ್ರಯೋಗ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಇಲ್ಲಿ ಮತ್ತಿತರೆಡೆ ನಡೆದ ಸಂಶೋಧನೆಗಳ ಫಲವಾಗಿ ರಾಸಾಯನಿಕ ಗೊಬ್ಬರಗಳ ಕೈಗಾರಿಕೆ ಸ್ಥಾಪಿತವಾಯಿತು. ಹಾಗೆಯೇ ಮುಂದೆ ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ ನಡೆದ ಸಂಶೋಧನೆಯ ಫಲವಾಗಿ ಮಣ್ಣಿನಲ್ಲಿ ಸಸ್ಯಬೆಳವಣಿಗೆಗೆ ಸಹಾಯಕಗಳಾದ ಸೂಕ್ಷ್ಮಜೀವಿಗಳ ಪಾತ್ರದ ಪ್ರಾಮುಖ್ಯ ವ್ಯಕ್ತವಾಯಿತು. == ಷಿ ಸಂಶೋಧನಕಾರ್ಯ == ಭಾರತದಲ್ಲಿ ಕೃಷಿ ಸಂಶೋಧನಕಾರ್ಯ ಸುಮಾರು 20ನೆಯ ಶತಮಾನದ ಆದಿಯಲ್ಲಿ ಪ್ರಾರಂಭವಾಯಿತು. ಆಗಿನ ಕೇಂದ್ರ ಸರ್ಕಾರ ಬಿಹಾರ್ ಪ್ರಾಂತ್ಯದ ಪೂಸಾ ಎಂಬಲ್ಲಿ ಕೇಂದ್ರಕೃಷಿ ಸಂಶೋಧನಾಲಯವನ್ನು ತೆರೆಯಿತು. 1936ರಲ್ಲಿ ಭೂಕಂಪದ ಪರಿಣಾಮವಾಗಿ ಇದು ವಿಧ್ವಂಸವಾದಾಗ ಈ ಚಟುವಟಿಕೆಯನ್ನು ಬಿಹಾರದಿಂದ ದೆಹಲಿಗೆ ವರ್ಗಾಯಿಸಲಾಯಿತು. ಈ ಸಂಸ್ಥೆ ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ. ಹಾಗೆಯೇ ಕೇಂದ್ರ ವೆಟರನರಿ ಸಂಶೋಧನ ಸಂಸ್ಥೆ 1890ರಲ್ಲಿ ಮುಕ್ತೇಶ್ವರದಲ್ಲಿ ಸ್ಥಾಪಿತವಾಯಿತು. ಮೈಸೂರು ರಾಜ್ಯದಲ್ಲಿ 1899ರಲ್ಲೇ ವ್ಯವಸಾಯದ ಇಲಾಖೆ ಅಸ್ತಿತ್ವಕ್ಕೆ ಬಂದಿತು. ಇವುಗಳಿಂದ ಉಪಯುಕ್ತ ಕೆಲಸ ನಡೆದು ಬೇಸಾಯದಲ್ಲಿ, ಪಶುಪಾಲನೆಯಲ್ಲಿ ಅನೇಕ ಸುಧಾರಣೆಗಳು ಅನುಷ್ಠಾನಕ್ಕೆ ಬಂದಿವೆ.ಹೀಗೆ ಬೆಳೆದು ಬಂದ ಕೃಷಿ ಸಂಶೋಧನಕಾರ್ಯ, ಕಳೆದ ಅರ್ಧ ಶತಮಾನದಲ್ಲಿ ತನ್ನದೇ ಆದ ಒಂದು ಸ್ವರೂಪವನ್ನು ಪಡೆದು ವಿಜ್ಞಾನ ಪ್ರಪಂಚದಲ್ಲಿ ವಿಶಿಷ್ಟ ಮನ್ನಣೆ ಪಡೆದಿದೆ. == ಭೂಫಲವಂತಿಕೆ ಮತ್ತು ಮಣ್ಣು-ನೀರಿನ ನಿರ್ವಹಣೆ == ವಿಜ್ಞಾನದ ಪ್ರಯೋಗ ಕ್ರಮಗಳನ್ನು ಅನ್ವಯಿಸಿ ಭೂಮಿ ಮತ್ತು ಅದರ ಫಲವಂತಿಕೆಯನ್ನು ಬೆಳೆಸುವ ದಾರಿಯಲ್ಲಿ ಸಂಶೋಧನೆ ಸಾಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆ, ಮಣ್ಣಿನ ಕ್ರಿಯೆ, ಸಸ್ಯಕ್ರಿಯೆ, ಸಸ್ಯರೋಗರುಜಿನಗಳಲ್ಲಿ ಸೂಕ್ಷ್ಮಜೀವಿಗಳ ಪಾತ್ರ ಇವನ್ನು ವಿಶೇಷವಾಗಿ ಅಭ್ಯಸಿಸಲಾಗಿದೆ. ಸಸ್ಯ ಬೆಳವಣಿಗೆ ಸಮರ್ಪಕವಾಗಿ ನಡೆಯಲು ಅನುಕೂಲವಾದ ಸನ್ನಿವೇಶ ಮುಖ್ಯ. ಮಣ್ಣು, ಬೀಜ, ನೀರು, ಪೋಷಕಗಳು, ಅನುಕೂಲವಾದ ಹವೆ, ರೋಗ ಮತ್ತು ಕೀಟಗಳಿಲ್ಲದಿರುವಿಕೆ ಇವೆಲ್ಲವುಗಳ, ಒಂದೊಂದರ ಮತ್ತು ಒಟ್ಟಿನ, ಪರಿಣಾಮ ಸಸ್ಯ ಬೆಳವಣಿಗೆಯ ಯಶಸ್ಸನ್ನು ನಿರ್ಧರಿಸುತ್ತದೆ. ಕೃಷಿಯ ಎಲ್ಲ ವಿಭಾಗಗಳಲ್ಲಿನ ಪ್ರಗತಿ ಹಾಗೂ ಪ್ರತಿಯೊಂದು ಎಕರೆ ಜಮೀನಿನಲ್ಲೂ ರೈತನಿಂದ ಅವುಗಳ ಅನುಷ್ಠಾನದ ಕ್ರಮಗಳು ಇವುಗಳೇ ವ್ಯವಸಾಯೋತ್ಪನ್ನಕ್ಕೆ ಕಾರಕ. ಮಣ್ಣಿಲ್ಲದೇ ಪ್ರಾಯೋಗಿಕವಾಗಿ ಮರಳಿನಲ್ಲಿ ಇಲ್ಲವೇ ಪೋಷಕಗಳನ್ನು ಕರಗಿಸಿದ ನೀರಿನಲ್ಲಿ ಸಸ್ಯವನ್ನು ಬೆಳೆಸಬಹುದಾದರೂ ಉತ್ಕøಷ್ಟವಾದ ಮಣ್ಣು ಕೃಷಿಗೆ ಮುಖ್ಯಾಧಾರ. ಸುಮಾರಾದ ಭೂಮಿಗಳನ್ನು ಒಳ್ಳೆಯದನ್ನಾಗಿ ಮಾಡಲು ಹೆಚ್ಚಾದ ಪ್ರಯತ್ನ ನಡೆಯುತ್ತಲೇ ಇದೆ. ಸಸ್ಯಬೆಳವಣಿಗೆಗೆ ಆಧಾರ ಭೂಮಿಯ ಮೇಲಿನ ಪದರ. ಇದರಿಂದಲೇ ಸಸ್ಯಕ್ಕೆ ನೀರು ಮತ್ತು ಪೋಷಕವಸ್ತುಗಳು ಒದಗುತ್ತವೆ. ಒಂದು ಪ್ರದೇಶದಲ್ಲಿನ ವಿವಿಧ ಮಣ್ಣುಗಳನ್ನು ನಕ್ಷೆಯಲ್ಲಿ ನಮೂದಿಸುವುದು ಒಂದು ಅತಿಮುಖ್ಯವಾದ ನವೀನ ಪ್ರಗತಿ. ಇದಕ್ಕೆ ವಿಮಾನದಿಂದ ತೆಗೆದ ಛಾಯಾಚಿತ್ರಗಳನ್ನು ಆಧಾರನಕ್ಷೆಗಳಾಗಿ ಬಳಸುವುದು ಇಂದಿನ ಕ್ರಮ. ಭಾರತದಲ್ಲಿ ಇತ್ತೀಚೆಗೆ ಇಂಥ ನಕ್ಷೆಗಳ ಬಳಕೆ ರೂಢಿಗೆ ಬರುತ್ತಿದೆ. ಈ ಛಾಯಾಚಿತ್ರಗಳಲ್ಲಿ ಸ್ಥೂಲಸಮೀಕ್ಷೆಗೆ ಸಹಕಾರಿಗಳಾದ ಭೂರೂಪರೇಖೆಗಳನ್ನು ಗುರುತಿಸಬಹುದಾದರೂ ವ್ಯಾಪಕವಾದ ಭೂಸಮೀಕ್ಷೆಯಾಗಬೇಕಾದರೆ ಮಣ್ಣಿನ ಆಳವನ್ನು ಅನೇಕ ಸ್ಥಳಗಳಲ್ಲಿ ಪರೀಕ್ಷಿಸುವುದು ಅಗತ್ಯ. ವಿವಿಧ ಮಣ್ಣಿನ ಸರಹದ್ದನ್ನು ನಿರ್ಧರಿಸಲು ಅನುಕೂಲಿಸುವ ಮಣ್ಣಿನ ಪಾಶ್ರ್ವಚಿತ್ರ (ಪ್ರೊಫೈಲ್) ಭೂಮಿಯ ಮೇಲೆ ಸ್ಥಳದಲ್ಲೇ ಗುರುತಿಸುವುದು ಅಗತ್ಯವಾಗುತ್ತದೆ. ಇದರ ಸಹಾಯದಿಂದ ವಿವಿಧ ಪ್ರಮಾಣದ ನಕ್ಷೆಗಳನ್ನು ತಯಾರಿಸಬಹುದು. ಈ ನಕ್ಷೆಗಳ ಆಧಾರದಿಂದ ಬೇಸಾಯ ಕ್ರಮಗಳ ಯೋಜನೆಯನ್ನು ರೂಪಿಸಬಹುದು. ಒಂದು ಮೈಲಿಗೆ 4 ಅಂಗುಲ ಪ್ರಮಾಣದ ನಕ್ಷೆಯಲ್ಲಿ 1/10 ಚದರಂಗುಲ 4 ಎಕರೆ ವಿಸ್ತಾರದ ಭೂಮಿಯನ್ನು ಪ್ರತಿಬಿಂಬಿಸುತ್ತದೆ. ವಿಸ್ತಾರ ಹೆಚ್ಚಿದಷ್ಟೂ ಪ್ರಮಾಣ ಕಿರಿದಾಗುತ್ತದೆ. ಈ ರೀತಿ ಒಂದು ಹಳ್ಳಿ ಹೋಬಳಿ ತಾಲ್ಲೂಕು ರಾಜ್ಯಗಳ ಮಣ್ಣಿನ ನಕ್ಷೆಗಳನ್ನು ತಯಾರಿಸಬಹುದು. ಹೀಗೆ ಪ್ರಪಂಚದ ಮಣ್ಣಿನ ನಕ್ಷೆಯ ತಯಾರಿಕೆ ನಡೆದಿದೆ. ಅಮೆರಿಕ, ಯೂರೋಪ್ ಖಂಡದ ಬಹುದೇಶಗಳು, ಕೆನಡ, ನ್ಯೂಜಿಲೆಂಡ್, ಸೋವಿಯತ್ ಒಕ್ಕೂಟ ಮುಂತಾದ ಅನೇಕ ದೇಶಗಳಲ್ಲಿ ಸಾಗುವಳಿಯಲ್ಲಿರುವ ಜಮೀನುಗಳೆಲ್ಲ ಸಮೀಕ್ಷೆಯಾಗಿ ನಕ್ಷೆಗಳು ತಯಾರಾಗಿವೆ. ಮಣ್ಣಿನ ಗುಣಗಳ ಅರಿವಿಗೆ ಮಣ್ಣಿನ ವರ್ಗೀಕರಣ ಅತ್ಯಾವಶ್ಯಕ. ಗುಣವಿಶೇಷಗಳ ಆಧಾರದ ಮೇಲೆ ಮಣ್ಣನ್ನು ಗುರುತಿಸುವುದು ಸಾಧ್ಯ. == ವರ್ಗೀಕರಣ == ಪ್ರಕೃತಿಯಲ್ಲಿ ಕಂಡುಬರುವ ಇತರ ವಸ್ತುಗಳಂತೆ ಮಣ್ಣುಗಳಿಗೆ ಸಹ ಸ್ವಭಾವದತ್ತವಾದ ಗುಣಗಳಿವೆ. ರಚನೆ ಬಣ್ಣ ಕಣಜೋಡಣೆ ಈ ಗುಣಗಳು ಮಣ್ಣುಗಳ ವರ್ಗೀಕರಣ ಕಾರ್ಯದಲ್ಲಿ ಪ್ರಯೋಜನಕರ. ಇವಲ್ಲದೆ ಮಣ್ಣಿನ ವರ್ಗೀಕರಣಕ್ಕೆ ಪ್ರೊಫೈಲ್ ಆಧಾರ. ಪ್ರೊಫೈಲ್ ಅಂದರೆ ಮೇಲ್ಮೈಯಿಂದ ಗಾಳಿ ಬಿಸಿಲು ಮಳೆಗಳ ಹೊಡೆತಕ್ಕೆ ಸಿಕ್ಕಿ ಶಿಥಿಲವಾದ ಬಂಡೆ ಮತ್ತು ಖನಿಜಗಳು ಸಿಕ್ಕುವವರೆಗಿನ ಸಾಧಾರಣವಾಗಿ ನಾಲ್ಕೈದು ಅಡಿ ಆಳದವರೆಗಿನ ಮಣ್ಣಿನ ಎಲ್ಲ ಪದರುಗಳು. ಅವೆಲ್ಲ ಒಟ್ಟಾಗಿ ಮಣ್ಣಿನ ವೈಶಿಷ್ಟ್ಯಕ್ಕೆ ಕಾರಣ. ಈ ಪ್ರೊಫೈಲ್ ರೂಪುಗೊಳ್ಳುವುದಕ್ಕೆ ಆ ಪ್ರದೇಶದ ವಾಯುಗುಣ ಮುಖ್ಯ ಕಾರಣ. ಪ್ರೊಫೈಲ್ ಕಲ್ಪನೆ ಬೆಳೆದದ್ದು ಸೋವಿಯತ್ ಒಕ್ಕೂಟದ ವಿಜ್ಞಾನಿಗಳ ಶ್ರಮದ ಫಲವಾಗಿ. ಈಗ ಈ ಸಿದ್ಧಾಂತಕ್ಕೂ ಮುಂದೆ ಹೋಗಿ ಮಣ್ಣು ಹೇಗೆಯೇ ಆಗಿರಲಿ ಪ್ರಸ್ತುತ ಅದರ ಪ್ರೊಫೈಲ್ ಲಕ್ಷಣಗಳ ಆಧಾರದ ಮೇಲೆ ವರ್ಗೀಕರಣ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಾರೆ. ಕಳೆದ 10-20 ವರ್ಷಗಳಲ್ಲಿ ಅಮೆರಿಕದಲ್ಲಿ ರೂಪುಗೊಂಡ ಈ ವರ್ಗೀಕರಣ ವ್ಯವಸ್ಥೆಯನ್ನು ಪ್ರಪಂಚವಿಡೀ ಒಪ್ಪಿಕೊಂಡು ಜಾರಿಯಲ್ಲಿ ತರಲು ಪ್ರಯತ್ನ ನಡೆದಿದೆ. ಹೀಗೆ ಶಾಸ್ತ್ರೀಯವಾಗಿ ತಯಾರಿಸಿದ ಮಣ್ಣಿನ ನಕ್ಷೆ ಬೇಸಾಯದ ಪ್ರಗತಿಗೆ ಅನೇಕ ವಿಧದಲ್ಲಿ ಸಹಾಯವಾಗಬಲ್ಲುದು. ಒಂದು ಪ್ರದೇಶದಲ್ಲಿ ಸಂಶೋಧನೆಯಿಂದ ಮತ್ತು ರೈತರ ಅನುಭವದಿಂದ ಹೊರಬಂದು ನಕ್ಷೆಯಲ್ಲಿ ಅಳವಡಿಸಿದ ಗುಣಗಳು ಮತ್ತೊಂದು ಪ್ರದೇಶದಲ್ಲಿ ವ್ಯವಸಾಯ ಯೋಜನೆಗಳ ತಯಾರಿಕೆಗೆ ಸಹಾಯವಾಗುತ್ತವೆ. ಉತ್ಕøಷ್ಟ ಬೇಸಾಯ ಜಾರಿಯಲ್ಲಿರುವ ಪ್ರದೇಶದ ಅನುಭವ ಬೇರೆಯವರಿಗೆ ದೊರೆಯುತ್ತದೆ. ಮಣ್ಣಿನ ಗುಣವಿಷಯ ಸಂಗ್ರಹಣೆಗೆ ಅನುಭವ ಉಪಕರಣ ಸಾಮಗ್ರಿಗಳನ್ನು ವ್ಯಾಪಕವಾಗಿ ಬಳಸುತ್ತಾರೆ. ಮಣ್ಣಿನ ಗುಣನಿರ್ಧಾರಕ್ಕೆ ಕಾರಣವಾದ ಜೇಡಿ ಬಹು ಸೂಕ್ಷ್ಮ ರಚನೆಯುಳ್ಳದ್ದು. ಅದರ ಮೇಲ್ಮೈ ವಿಸ್ತೀರ್ಣ, ರಾಸಾಯನಿಕ ಮತ್ತು ಜೇಡಿ ಭೌತ ರಚನೆಗಳ ವೈಶಿಷ್ಟ್ಯ-ಇವೇ ಬಹುತೇಕ ಗುಣಗಳನ್ನು ನಿರ್ಧರಿಸುವ ಅಂಶಗಳು. ಮಣ್ಣಿನ ನೀರಿನ ಶೇಖರಣೆ ಬಸಿಯುವಿಕೆ ಸಾಗುವಳಿ ಸೌಲಭ್ಯ ಪೋಷಕಾಂಶಗಳ ಪ್ರಮಾಣ ಹುಳಿ ಅಥವಾ ಕ್ಷಾರ ಪರಿಸ್ಥಿತಿ_ಇವೆಲ್ಲ ಗುಣಗಳು ಜೇಡಿಯ ಗುಣಗಳನ್ನು ಅವಲಂಬಿಸಿವೆ. ಜೇಡಿಯ ಗುಣವಿಶ್ಲೇಷಣೆಯಲ್ಲಿ ಅತ್ಯಾಧುನಿಕ ಸಲಕರಣೆಗಳಾದ ಎಕ್ಸ್‍ಕಿರಣ, ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳು ಮುಂತಾದ ಸಾಧನಗಳನ್ನು ಬಳಸುತ್ತಾರೆ. ಈ ಸಂಶೋಧನೆಗಳಿಂದ ಜೇಡಿ ಹರಳಿನ ಆಕೃತಿ ಮತ್ತು ಮಣ್ಣುಮಣ್ಣುಗಳಲ್ಲಿ ಈ ಜೇಡಿ ಆಕೃತಿ ವ್ಯತ್ಯಾಸ ಬೇರೆ ಬೇರೆ ಮಣ್ಣುಗಳ ಗುಣವೈವಿಧ್ಯಕ್ಕೆ ಕಾರಣ ಎಂಬ ಅಂಶ ತಿಳಿದುಬಂದಿದೆ. ಕಪ್ಪು ಮಣ್ಣುಗಳು ನೀರು ಕುಡಿದಾಗ ಉಬ್ಬುತ್ತವೆ; ಒಣಗಿದಾಗ ಕುಗ್ಗಿ ಬಿರುಕು ಬಿಡುತ್ತವೆ. ಇದಕ್ಕೆ ಕಾರಣ ಆ ಮಣ್ಣಿನ ಜೇಡಿಯಲ್ಲಿರುವ ಮಾಂಟ್ ಮೊರಿಲನೈಟ್ ಎಂಬ ಖನಿಜದ ರಚನೆಯ ವೈಶಿಷ್ಟ್ಯ. ಕೆಂಪು ಮಣ್ಣಿನಲ್ಲಿ ಕೆಯೊಲಿನೈಟ್ ಎಂಬ ಖನಿಜ ಇದೆ. == ರಾಸಾಯನಿಕ ಕ್ರಮ == ಅನೇಕ ಸುಲಭ ರಾಸಾಯನಿಕ ಕ್ರಮಗಳಿಂದ ಮಣ್ಣಿನ ಫಲವಂತಿಕೆಯನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ಹಿಂದಿನಿಂದಲೂ ಕೆಲಸ ನಡೆದು ಬಂದಿದೆ. ಈಗ ಕೆಲವು ವರ್ಷಗಳಲ್ಲಿ ನಿಖರವಾದ ಕ್ರಮಗಳನ್ನು ಅಳವಡಿಸಿಕೊಂಡು ಪ್ರಯೋಗಶಾಲೆಯಲ್ಲಿ ಕೆಲವೇ ಮಿನಿಟುಗಳಲ್ಲಿ ಒದಗುವ ರೂಪದಲ್ಲಿರುವ ಪೋಷಕಾಂಶಗಳು, ಮಣ್ಣಿನ ಕ್ಷಾರಾಂಕ (ಠಿಊ), ಲವಣಾಂಶ ಮತ್ತಿತರ ಉಪಯುಕ್ತ ಗುಣಗಳನ್ನು ನಿರ್ಧರಿಸುವುದು ಸಾಧ್ಯ. ಇದರ ಆಧಾರದ ಮೇಲೆ ಪೈರಿಗೆ ಎಷ್ಟು ಗೊಬ್ಬರ ಅಗತ್ಯ ಎಂಬ ವಿಷಯವನ್ನು ನಿರ್ಧರಿಸಬಹುದು. ರೇಡಿಯೋ ಸಮಸ್ತಾನಿಗಳ ಬಳಕೆಯಿಂದ ಸಸ್ಯ ಪೋಷಣೆಯಲ್ಲಿ ಹೊಸ ವಿಷಯಗಳು ತಿಳಿದುಬಂದಿವೆ. ಉದಾಹರಣೆಗೆ, ರಂಜಕ ಗೊಬ್ಬರವನ್ನು ಮಣ್ಣಿಗೆ ಸೇರಿಸಿದ ಮೇಲೆ ಸಸ್ಯಕ್ಕೆ ಒದಗುವುದು ಮಣ್ಣಿನ ಪರಿಸ್ಥಿತಿಯನ್ನು ಅವಲಂಬಿಸಿದೆ; ಹಾಗೆಯೇ ಸಸ್ಯ ಇದನ್ನು ಹೀರದ ಮೇಲೆ ಅದರ ವಿವಿಧ ಭಾಗಗಳಲ್ಲಿ ಅದು ಹೇಗೆ ಚಲಿಸಿ ಉಪಯೋಗವಾಗುತ್ತದೆ ಎಂಬುದನ್ನು ಉದ್ದಿಪ್ತಗೊಳಿಸಿದ ರಂಜಕ ವಸ್ತುಗಳ ಸಹಾಯದಿಂದ ಕಂಡುಕೊಳ್ಳುವುದು ಸಾಧ್ಯ. ವ್ಯವಸಾಯದಲ್ಲಿ ಭೂಫಲವಂತಿಕೆಯನ್ನು ಬೆಳೆಸಲು ರಾಸಾಯನಿಕ ವಸ್ತುಗಳ ಬಳಕೆ ಕಳೆದ ಶತಮಾನದ ಆದಿ ಭಾಗದಲ್ಲಿ ಪ್ರಾರಂಭವಾಯಿತು. ಅಮೋನಿಯಂ ಸಲ್ಫೇಟ್, ಚಿಲಿಯನ್ ನೈಟ್ಟ್ರೇಟ್, ಸೂಪರ್ ಫಾಸ್ಪೇಟ್, ಮ್ಯೂರಿಯೇಟ್ ಆಫ್ ಪೊಟ್ಯಾಷ್ ಮುಂತಾದ ರಾಸಾಯನಿಕಗಳು ವ್ಯಾಪಕವಾಗಿ ಬೇಸಾಯದಲ್ಲಿ ಬಳಕೆಗೆ ಬಂದು ಕೃಷಿ ಉತ್ಪನ್ನ ವಿಶೇಷವಾಗಿ ಹೆಚ್ಚಿತು. ಒಂದನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯಲ್ಲಿ ಹಾಬರ್ ಮತು ಬಾಷ್ ಎಂಬ ವಿಜ್ಞಾನಿಗಳು ಅಮೋನಿಯವನ್ನು ತಯಾರಿಸುವ ವಿಧಾನವನ್ನು ಕಂಡಿಹಿಡಿದರು. ನಿಜವಾಗಿಯೂ ಕೃಷಿ ಪ್ರಗತಿಯಲ್ಲಿ ಇದೊಂದು ದೊಡ್ಡ ಮೈಲಿಗಲ್ಲು. ಇದುವರೆಗೂ ಗೊಬ್ಬರಗಳ ಸಾಧನ ಸಂಪತ್ತು ಪ್ರಕೃತಿಯಲ್ಲಿ ದೊರೆಯುವ ನಿಕ್ಷೇಪಕ್ಕಷ್ಟೇ ಮಿತಿಯಾಗಿತ್ತು. ಈ ಸಂಶೋಧನೆಯ ಫಲವಾಗಿ ಹೇರಳವಾಗಿ ಗೊಬ್ಬರ ತಯಾರಿಸಿ ಬೇಸಾಯದ ಉತ್ಪನ್ನಗಳನ್ನು ಅಧಿಕಗೊಳಿಸುವುದು ಸಾಧ್ಯವಾಯಿತು. ಹೆಚ್ಚು ಸಾರವುಳ್ಳ ಯೂರಿಯಾ, ಅಮೋನಿಯಾ ನೈಟ್ರೇಟ್, ಅನಾದ್ರ್ರ ದ್ರವ ಅಮೋನಿಯ ಮುಂತಾದ ಗೊಬ್ಬರಗಳು ಈಗ ಕೃಷಿಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿವೆ. ಹಾಗೆಯೇ ಹೆಚ್ಚು ರಂಜಕಾಂಶಗಳುಳ್ಳ ಟ್ರಿಪಲ್ ಸೂಪರ್, ಮೆಟಾಫಾಸ್ಪೇಟ್, ದ್ರವರಂಜಕಾಮ್ಲ ಇಂಥ ರಂಜಕ ಗೊಬ್ಬರಗಳು ಸಾಮಾನ್ಯ ಬಳಕೆಯಲ್ಲಿವೆ. ಗೊಬ್ಬರಗಳ ಬೆಲೆ ಅಗ್ಗವಾಗಿ ಬಳಕೆ ಹೆಚ್ಚಿ ಬೇಸಾಯೋತ್ಪನ್ನ ಹೆಚ್ಚಲು ಸಾಧ್ಯವಾಗಿದೆ. ಹೆಚ್ಚು ಪರಿಮಾಣದಲ್ಲಿ ಸಸ್ಯಕ್ಕೆ ಬೇಕಾಗುವ ಸಾರಜನಕ, ರಂಜಕ ಮತ್ತು ಪೊಟಾಷಿಯಂಗಳಲ್ಲದೆ ಕಬ್ಬಿಣ, ಬೋರಾನ್, ತಾಮ್ರ, ಸತು, ಮ್ಯಾಂಗನೀಸ್, ಮೊಲಿಬ್ಡಿನಂ ಮುಂತಾದವು ಸೂಕ್ಷ್ಮ ಪರಿಮಾಣದಲ್ಲಿ ಸಸ್ಯಕ್ಕೆ ಅಗತ್ಯ ಎಂಬ ಅಂಶದ ತಿಳುವಳಿಕೆ ಇತ್ತೀಚಿನದು. ಸಾಮಾನ್ಯವಾಗಿ ಬೇಸಾಯದಲ್ಲಿ ಇವುಗಳ ಕೊರತೆ ಅಷ್ಟೇನೂ ವ್ಯಾಪಕವಲ್ಲ. ಮಣ್ಣಿನಿಂದ ಇಲ್ಲವೇ ಕೊಟ್ಟಿಗೆ ಗೊಬ್ಬರದಿಂದ ಈ ಅವಶ್ಯಕತೆ ಪೂರೈಸುತ್ತದೆ. ಹೀಗಾಗದೆ ಅಭಾವ ಉಂಟಾದಾಗ ಕೊರತೆ ಚಿಹ್ನೆ ಕಾಣಬರುತ್ತದೆ. ಕೆಲವು ವೇಳೆ ಇವುಗಳ ಪರಿಮಾಣ ಮಿತಿ ಮೀರಿದಾಗ ನಂಜಾಗುವುದು ಉಂಟು. ಮಣ್ಣಿಗೆ ಕೊಟ್ಟೋ ಬೆಳೆಯ ಮೇಲೆ ಸಿಂಪಡಿಸಿಯೂ ಕೊರತೆಯನ್ನು ನಿವಾರಿಸಬಹುದು. == ಜನಸಂಖ್ಯೆ ಇತಿಮಿತಿ == ಕೃಷಿ ಯೋಗ್ಯವಾದ ಎಲ್ಲ ಭೂಮಿ ಬಹಳ ದೇಶಗಳಲ್ಲಿ ಉಳುಮೆಯಾಗಿದೆಯಾದರೂ ಜನಸಂಖ್ಯೆ ಇತಿಮಿತಿಯಿಲ್ಲದೆ ಬೆಳೆಯುತ್ತಿದೆ. ಹೀಗಾಗಿ ಇರುವ ಭೂಮಿಯನ್ನು ದುರುಪಯೋಗಪಡಿಸಿ ಹಾಳು ಮಾಡದೆ ಅದರ ಉತ್ಪಾದನಾ ಸಾಮಥ್ರ್ಯವನ್ನು ಬೆಳೆಸುವುದು ಮಾನವನ ಉಳಿವು ಅಳಿವಿನ ಸಮಸ್ಯೆಯಾಗಿದೆ. ಮಣ್ಣು ಸವೆದು ಕೊಚ್ಚಿ ಭೂಮಿ ಪಾಳಾಗುತ್ತಿರುವುದು ಅನೇಕ ಪ್ರದೇಶಗಳಲ್ಲಿ ಸಾಮಾನ್ಯ ದೃಶ್ಯ. ಈ ಕ್ಷೀಣತೆಯನ್ನು ತಡೆಗಟ್ಟುವುದಕ್ಕೆ ಭೂಸಂರಕ್ಷಣಾ ಕಾರ್ಯಕ್ರಮ ಈಗ ಎಲ್ಲಾ ದೇಶಗಳಲ್ಲಿಯೂ ಕಾರ್ಯಗತವಾಗುತ್ತಿದೆ. ಸ್ವಾಭಾವಿಕ ಸಸ್ಯ ಸಂಪತ್ತುಗಳ ರಕ್ಷಣೆ, ವೃದ್ಧಿ ಈ ಅಂಶಗಳನ್ನು ಸಂರಕ್ಷಣೆಯ ಕಲ್ಪನೆ ಒಳಗೊಂಡಿದೆ. ಹಾಗೆಯೇ ಪ್ರಸ್ತುತ ಸಾಗುವಳಿಗೆ ಯೋಗ್ಯವಲ್ಲ ಎಂದು ಬಿಟ್ಟಿರುವ ಭೂಮಿಗಳನ್ನು ಸುಧಾರಿಸಿ ಯೋಗ್ಯವನ್ನಾಗಿ ಮಾಡಬಹುದು. ಹಾಲೆಂಡ್ ದೇಶದಲ್ಲಿ ಕಟ್ಟೆ ಕಟ್ಟುವುದರ ಮೂಲಕ ಸಮುದ್ರವನ್ನು ಹಿಂದೊತ್ತಿ ಆ ಭೂಮಿಯನ್ನು ಕೃಷಿ ಮಾಡುತ್ತಿರುವುದು ಸಾಗುವಳಿ ಭೂಮಿಯನ್ನು ವಿಸ್ತರಿಸಿರುವುದಕ್ಕೆ ಒಂದು ಕೌತುಕದ ನಿದರ್ಶನ. ಮರಳು ಗಾಡಿಗೆ ನೀರು ಹಾಯಿಸಿ ಲಾಭದಾಯಕವಾದ ಕೃಷಿಯನ್ನು ಇಸ್ರೇಲ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾಗಳಲ್ಲಿ ಅಸ್ತಿತ್ವಕ್ಕೆ ತಂದಿರುವುದು ಮಾನವನ ಸಾಹಸಕ್ಕೆ ನಿದರ್ಶನ. ಸಂರಕ್ಷಣ ಚಟುವಟಿಕೆಯ ಮತ್ತೊಂದು ಕಾರ್ಯಕ್ರಮ ಮೈಸೂರು ರಾಜ್ಯದಲ್ಲಿ ಅನೇಕ ಪ್ರದೇಶಗಳಲ್ಲಿ ಇಳಿಜಾರು ಭೂಮಿಗಳಲ್ಲಿ ಕಾರ್ಯಗತವಾಗುತ್ತಿರುವ ಸಮಪಾತಳಿ ಒಡ್ಡುಗಳ ನಿರ್ಮಾಣ. ಇದರಿಂದ ಮಣ್ಣಿನ ಸವೆತ ಕಡಿಮೆಯಾಗುತ್ತದೆ. ಇದರೊಡನೆ ಸೂಕ್ತ ಸಾಗುವಳಿ ಕ್ರಮಗಳಿದ್ದಲ್ಲಿ ಮಣ್ಣಿನ ಉತ್ಪಾದನಾ ಸಾಮಥ್ರ್ಯಗಳನ್ನು ಹೆಚ್ಚಿಸುವುದು ಸಾಧ್ಯ. ಚೌಳು ಕ್ಷಾರ ಇಲ್ಲವೇ ಹುಳಿಗಳಿಂದಾಗಿ ಪಾಳಾಗಿರುವ ಭೂಮಿಯನ್ನು ನೀರು ಕಟ್ಟಿ ಬಸಿದು ಜಿಪ್ಸಂ ಕೊಟ್ಟು ಸಾಗುವಳಿಗೆ ಯೋಗ್ಯವಾಗಿ ಮಾಡಬಹುದು. ಹುಳಿ ಭೂಮಿಗಳಿಗೆ ಸುಣ್ಣ ಸೇರಿಸಿ ಸುಧಾರಣೆ ಮಾಡಬೇಕು. == ನೀರಾವರಿ == ಬೇಸಾಯದ ನೀರಾವರಿ ಪುರಾತನ ಕಾಲದಿಂದ ಅಸ್ತಿತ್ವದಲ್ಲಿದ್ದರೂ ಅದರ ಬಳಕೆಯಲ್ಲಿ ವಿವೇಚನೆ ಕಡಿಮೆ. ಭೂಮಿಯು ತೇವದ ಮಟ್ಟವನ್ನು ಟೆನ್ಸಿಯಾಮೀಟರ್, ಜಿಪ್ಸಂಬ್ಲಾಕ್ ಮತ್ತಿತರ ಸಲಕರಣೆಗಳ ಸಹಾಯದಿಂದ ಅಳೆದು ಹದವಾದ ಮಟ್ಟದಲ್ಲಿ ನೀರು ಹಾಯಿಸುವ ವ್ಯವಸ್ಥೆ ಈಗ ತೋಟ ಮತ್ತಿತರ ಬೇಸಾಯದಲ್ಲಿ ಸಾಧಾರಣ ಕ್ರಮ. ಚಿಮುಕು ನೀರಾವರಿ ಅಥವಾ ಸ್ಪಿಂಕ್ಲರ್ ನೀರಾವರಿಯಿಂದ ನೀರನ್ನು ಮಳೆಯಂತೆ ಬೇಕಾದಾಗ ಸುರಿಸಬಹುದು. ಉಪ್ಪು ಮತ್ತು ಕ್ಷಾರ ಭೂಮಿಗಳನ್ನು ಸಾಗುವಳಿಗೆ ಯೋಗ್ಯ ಮಾಡಲು ವ್ಯಾಪಕ ಸಂಶೋಧನೆ ನಡೆದು ಉಪಯುಕ್ತ ಕ್ರಮಗಳು ರೂಪಿಸಲ್ಪಟ್ಟಿವೆ. ನೀರಾವರಿ ಕಾಲುವೆಗಳಲ್ಲಿ ನೀರು ಪೋಲಾಗದೆ ಸಸ್ಯ ಬೆಳವಣಿಗೆಗೆ ಉಪಯೋಗವಾಗುವಂತೆ ಅವುಗಳಿಗೆ ಕಾಂಕ್ರೀಟ್ ಆಸ್ಫಾಲ್ಟ್ ಅಥವಾ ಜೇಡಿಯಿಂದ ಭದ್ರಪಡಿಸಿ ನೀರು ಜಿನುಗಿ ಆಗುವ ನಷ್ಟವನ್ನು ತಪ್ಪಿಸಬಹುದು. ನೀರು ಹಾಯಿಸುವ ಉತ್ತಮ ಕ್ರಮಗಳು ಅಂದರೆ ಅಂಚು ನೀರಾವರಿ, ಗೆರೆ ನೀರಾವರಿ ಮುಂತಾದವುಗಳ ಬಳಕೆಯಿಂದ ನೀರಿನ ಮಿತವ್ಯಯವಾಗುವುದಲ್ಲದೆ ಪ್ರದೇಶದ ಭೂಮಿ ಜೌಗಾಗುವುದು ತಪ್ಪುತ್ತದೆ. ವಿಸೋಮೀಟರ್ ಎಂಬ ಉಪಕರಣದ ಬಳಕೆಯಿಂದ ಒಂದು ಪ್ರದೇಶದಲ್ಲಿ ಅಂತರ್ಜಲ ಮಟ್ಟದ ಸ್ಥಿತಿಯನ್ನು ಎಚ್ಚರಿಕೆಯಿಂದ ಗಮನಿಸಿ ಕಡಗುಳ ವ್ಯವಸ್ಥೆಯಿಂದ ಅದನ್ನು ತಗ್ಗಿಸುವ ವ್ಯಾಪಕ ಕ್ರಮ ಪಾಶ್ಚಾತ್ಯ ದೇಶಗಳ ನೀರಾವರಿ ಬೇಸಾಯದ ಅಂಗ. ಕೆರೆ ಕುಂಟೆ ಜಲಾಶಯಗಳ ಮೇಲ್ಮೈಯಿಂದ ನೀರು ಆವಿಯಾಗಿ ನಷ್ಟವಾಗುವುದನ್ನು ತಪ್ಪಿಸಲು ರಾಸಾಯನಿಕ ವಸ್ತುಗಳು ಬಳಕೆಗೆ ಬರುತ್ತಿವೆ. ರೈತನಿಗೆ ಬೇಕಾದಾಗ ಮಳೆ ಬೀಳುವುದನ್ನು ಕುರಿತು ಪ್ರಯತ್ನ ನಡೆಯುತ್ತಲೇ ಇದೆ. ಸ್ವಾಭಾವಿಕವಾದ ಮಳೆಹನಿಗಳು ಎರಡು ವಿಧಗಳಲ್ಲಿ ಆಗುತ್ತವೆ. ಮೋಡದಲ್ಲಿ ಸಣ್ಣ ಮಳೆ ಕಣಗಳು ಒಂದಕ್ಕೊಂದು ತಾಕಿ ಒಂದುಗೂಡಿ ಹನಿಗಳಾಗಿ ಬೀಳುತ್ತವೆ. ಈ ರೀತಿ ನಾವು ಮಾಡುವುದಕ್ಕಾಗುವುದಿಲ್ಲ. ಎರಡನೆಯದಾಗಿ ಮಂಜುಗಡ್ಡೆ ಕಣಗಳು ನೀರಿನ ಕಣಗಳೊಡನೆ ಘರ್ಷಣೆಯಾದಾಗ ಮಳೆಹನಿಗಳು ಉಂಟಾಗುತ್ತವೆ. ಮೋಡದಲ್ಲಿನ ಶೈತ್ಯವನ್ನು ಮಂಜಾಗಿ ಘನೀಕರಿಸುವುದಕ್ಕೆ ಘನ ಇಂಗಾಲದ ಡೈಆಕ್ಸೈಡ್ ಪುಡಿಯನ್ನು ಹಾಕುವ ಪ್ರಯೋಗ ನಡೆದಿದೆ. ಸಿಲ್ವರ್ ಅಯೊಡೈಡ್ ಪುಡಿ ಸಹ ಇದಕ್ಕೆ ಬಳಸಲ್ಪಟ್ಟಿದೆ. ಪ್ರಯೋಜನಕಾರಿ ಫಲಿತಾಂಶ ಇನ್ನೂ ದೊರೆತಿಲ್ಲ. ಮಳೆಯಲ್ಲಿನ ಆಲಿಕಲ್ಲು ಹಾವಳಿ ತೋಟಗಾರರಿಗೆಲ್ಲ ತಿಳಿದ ವಿಷಯ. ಇದನ್ನು ನಿವಾರಿಸುವ ದಿಕ್ಕಿನಲ್ಲಿ ಸಂಶೋಧನೆ ನಡೆದಿದೆ. == ಬೆಳೆ ಅಭಿವೃದ್ಧಿ == ಕೃಷಿ ಉತ್ಪನ್ನ ಹೆಚ್ಚಳಕ್ಕೆ ನಮಗಿರುವ ಸಾಧನಗಳಲ್ಲೆಲ್ಲ ಅತ್ಯಂತ ಸುಲಭ ಮತ್ತು ಪರಿಣಾಮಕರವಾದದ್ದು ಸುಧಾರಿತ ಬೀಜಗಳ ಬಳಕೆ. ಸಂಕರಣ ಅಥವಾ ಅಡ್ಡ ತಳಿಗಳು ಸಸ್ಯವಿಜ್ಞಾನಿಗಳು ನಮಗೆ ಕೊಟ್ಟಿರುವ ಮಹತ್ತ್ವದ ಕೊಡುಗೆ. ಇವು ಶಕ್ತಿಮಾನ್ ತಳಿಗಳು. ನಮ್ಮಲ್ಲಿ ಈಗ ಕೆಲವು ವರ್ಷಗಳಲ್ಲಿ ಜನಪ್ರಿಯವಾಗಿರುವ ಅಮೆರಿಕದ ಮುಸುಕಿನ ಜೋಳ ಇದಕ್ಕೆ ದೃಷ್ಟಾಂತ. ಮೊದಲು ಈ ಜೋಳದ ಇಳುವರಿ 6-7 ಕ್ವಿಂಟಲ್ ಇತ್ತು. ಹೊಸ ತಳಿಗಳಿಂದ 30-35 ಕ್ವಿಂಟಲ್ ಇಳುವರಿ ಬರುತ್ತದೆ. ಇದೇ ರೀತಿ ಬಾಜ್ರ, ಜೋಳ, ಹತ್ತಿ ಮತ್ತಿತರ ಅಡ್ಡತಳಿಗಳು ಬಂದಿವೆ. ಇವುಗಳ ಫಲವಾಗಿ ಎಕರೆ ಇಳುವರಿ 3-4 ಪಟ್ಟು ಹೆಚ್ಚಿದೆ. ಈ ತಳಿಗಳ ಒಂದು ಮುಖ್ಯ ವೈಶಿಷ್ಟ್ಯ ಗೊಬ್ಬರ ಹೆಚ್ಚು ಕೊಟ್ಟಷ್ಟೂ ಇಳುವರಿ ಅಧಿಕವಾಗುವುದು. ಸಸ್ಯದಲ್ಲೇ ಸ್ವಾಭಾವಿಕವಾಗಿರುವ ಐ.ಎ.ಐ., ಜಿ.ಎ. ಮೊದಲಾದ ವಸ್ತುಗಳ ಬೆಳೆ ವೃದ್ಧಿಕಾರಕಗಳು. 2-4-ಡಿ.ಐ.ಬಿ.ಎ.. ಎನ್.ಎ.ಎ. ಮುಂತಾದವು ಇಂಥ ಗುಣಗಳನ್ನು ಪಡೆದಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. 2-4-ಡಿ, ಎನ್.ಎ.ಎ. ಇವುಗಳ ಪ್ರಯೋಗದಿಂದ ಹಣ್ಣುಗಳು ತೊಟ್ಟು ಕಳಚಿ ಬೀಳುವುದನ್ನು ತಪ್ಪಿಸಬಹುದು. ಜಿ.ಎ. ಪ್ರಯೋಗದಿಂದ ದ್ರಾಕ್ಷಿಹಣ್ಣುಗಳು ದೃಢವಾಗುತ್ತದೆ. 2-4-ಡಿಯನ್ನು ಸಾಕಷ್ಟು ಪರಿಮಾಣದಲ್ಲಿ ಪ್ರಯೋಗಿಸಿದರೆ ಕಳೆ ನಾಶವಾಗುತ್ತದೆ. ಕೈನಟಿನ್ ಎಂಬ ರಾಸಾಯನಿಕ ವಸ್ತು ಉಷ್ಣ ಅಥವಾ ಚಳಿಯಿಂದ ಸಸ್ಯಗಳಿಗೆ ಆಗಬಹುದಾದ ತೊಂದರೆಯನ್ನು ಸಹಿಸಬಲ್ಲ ಸಾಮಥ್ರ್ಯ ಕೊಡುತ್ತದೆ. == ವ್ಯವಸಾಯದ ಯಾಂತ್ರೀಕರಣ == ಕೃಷಿಯಲ್ಲಿ ಅಗತ್ಯವಾದ ಶ್ರಮವನ್ನು ಆದಿಮಾನವ ತನ್ನ ಬಾಹುಬಲದಿಂದ ಒದಗಿಸಿಕೊಳ್ಳುತ್ತಿದ್ದ. ಮುಂದೆ ಈ ಶ್ರಮ ಎತ್ತು ಕುದುರೆ ಎಮ್ಮೆ ಕೋಣಗಳಿಂದ ಬಂತು. ಈಗ ದುಡಿಮೆಗೆ ಯಂತ್ರಗಳ ಬಳಕೆ ಬರುತ್ತಿದೆ. ಟ್ರಾಕ್ಟರ್ ಜೊತೆ ಬಳಸಬಹುದಾದ ಸಲಕರಣೆಗಳು ಬಂದಿವೆ. ಪ್ರಸ್ತುತ ಟ್ರಾಕ್ಟರ್ ಬಳಕೆಯಿಂದ ಉಳುಮೆ, ಹೆಂಟೆಯನ್ನು ಪುಡಿ ಮಾಡುವುದು, ಗೊಬ್ಬರ ಹರಡುವುದು ಮುಂತಾದ ಎಲ್ಲ ಕೆಲಸಗಳನ್ನೂ ಮಾಡಬಹುದು. ಇವಲ್ಲದೆ ಬೆಳೆ ಕಟಾವು, ಕಾಳು ಬೇರ್ಪಡಿಸುವುದು, ಕಬ್ಬನ್ನು ಕೊಯ್ದು ಲಾರಿಗೆ ತುಂಬುವುದು, ಆಲೂಗಡ್ಡೆ ಅಗೆದು ಅದನ್ನು ಆರಿಸಿ ಚೀಲಕ್ಕೆ ತುಂಬಿ ಟ್ರಕ್ಕಿನಲ್ಲಿ ಪೇರುವುದು, ಹಣ್ಣು ಕೀಳುವುದು, ಹಾಲು ಕರೆಯುವುದು-ಇಂಥ ಎಲ್ಲ ಕೆಲಸಗಳನ್ನು ಮಾಡಲೂ ಯಂತ್ರವನ್ನು ಅಳವಡಿಸಿಕೊಂಡಿದ್ದಾರೆ. == ಸಸ್ಯ ಸಂರಕ್ಷಣೆ == ಸಸ್ಯಗಳಿಗೆ ಕೀಟಗಳಿಂದ ಒದಗುವ ಹಾನಿಯನ್ನು ಕೀಟರೋಗ ನಿರೋಧಕ ಶಕ್ತಿಯುಳ್ಳ ತಳಿಗಳ ವೃದ್ಧಿ, ತಡೆದ ಬಿತ್ತನೆ ಇನ್ನಿತರ ಕ್ರಮಗಳಿಂದ ಕೆಲಮಟ್ಟಿಗೆ ಕಡಿಮೆ ಮಾಡುವುದು ಸಾಧ್ಯ. ಕೀಟಗಳ ಹತೋಟಿ ಕ್ರಮಗಳು ಎರಡು: ರಾಸಾಯನಿಕಗಳ ಬಳಕೆ ಮತ್ತು ಸ್ವಾಭಾವಿಕ ಶತ್ರುಗಳ ಮೂಲಕ ಉಪದ್ರವಕಾರಿಗಳ ನಿವಾರಣೆ (ನೋಡಿ- ಕೀಟನಾಶಕಗಳು). ಕೀಟಗಳಿಂದ ಅಥವಾ ರೋಗಾಣುಗಳಿಂದ ಹರಡುವ ವೈರಸ್, ಬ್ಯಾಕ್ಟೀರಿಯಾ, ಬೂಷ್ಟು ಮುಂತಾದ ರೋಗಗಳಿಂದ 50%ಕ್ಕೂ ಹೆಚ್ಚು ಬೆಳೆ ನಾಶವಾಗುತ್ತದೆ. ಇವುಗಳೆದುರು ಮೊದಲಿನಿಂದಲೂ ಬಂದ ಕ್ರಮ ನಿರೋಧಶಕ್ತಿಯುಳ್ಳ ತಳಿಗಳ ವೃದ್ಧಿ. ಈಗೀಗ ರೋಗನಿರೋಧಕ್ಕೆ ರಾಸಾಯನಿಕಗಳ ಬಳಕೆ ಸಾಮಾನ್ಯವಾಗುತ್ತಿದೆ. ಸಸ್ಯಶರೀರ ಶಾಸ್ತ್ರ, ಜೀವರಸಾಯನಶಾಸ್ತ್ರ, ತಳಿಶಾಸ್ತ್ರ ಇವುಗಳಲ್ಲಿನ ಪರಿಣತರ ಸಹಕಾರ ಮತ್ತು ಶ್ರಮಗಳ ಪರಿಣಾಮವಾಗಿ ರೋಗನಿರೋಧಕ್ಕೆ ಸಮಗ್ರ ಕ್ರಮಗಳು ರೂಪಿತವಾಗಿವೆ. (ನೋಡಿ- ಕೃಷಿ-ರಸಾಯನ-ಶಾಸ್ತ್ರ) == ಖುಷ್ಕಿ ಬೇಸಾಯ == ಇದುವರೆವಿಗೂ ಭಾರತದಲ್ಲಿ ಬೇಸಾಯ ಸುಧಾರಣೆ ಕಾರ್ಯ ಬಹುವಾಗಿ ತರೀ ಬೆಳೆಗಳಿಗೆ ಸಂಬಂಧಿಸಿತ್ತು. ಸಂಶೋಧನೆಯ ಪ್ರಯೋಜನ ತರೀ ಜಮೀನುಳ್ಳ ಅನುಕೂಲಸ್ಥ ರೈತರಿಗೆ ಮಾತ್ರ ಮುಟ್ಟಿದೆ. ನೀರಿನ ಸೌಕರ್ಯ ಭಾರತದಲ್ಲಿ ಕೇವಲ 20%ರಷ್ಟು ಜಮೀನಿಗೆ ಮಾತ್ರ. ಉಳಿದ 80% ಭಾಗದಲ್ಲಿ ಬೆಳೆ ಮಳೆಯನ್ನೇ ಅವಲಂಬಿಸಿ ಆಗಬೇಕಾಗಿದೆ. ಇದನ್ನು ನಂಬಿರುವ ರೈತರ ಸಂಖ್ಯೆಯೇ ಹೆಚ್ಚು. ಅವರ ಜೀವನ ಮಳೆಯಷ್ಟೇ ಅನಿಶ್ಚಿತ. ಈಗ 2-3 ವರ್ಷಗಳಿಂದ ಈ ದಿಕ್ಕಿನಲ್ಲಿ ಅಂದರೆ ಖುಷ್ಕಿ ಬೇಸಾಯದ ಅಭಿವೃದ್ಧಿಗೆ ಸಂಶೋಧನೆ ಪ್ರಾರಂಭವಾಗಿದೆ. ಖುಷ್ಕಿ ಪ್ರದೇಶಗಳಲ್ಲಿ ಉತ್ಪಾದನ ಸಾಮಥ್ರ್ಯವನ್ನು ಹೆಚ್ಚಿಸುವ ಸಮಸ್ಯೆಗೆ ಪರಿಹಾರ ಎರಡು ಬಗೆ. ದೂರದ ಜಲಾಶಯಗಳಿಂದ ಕಾಲುವೆಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸುವುದು ಒಂದು ಶಾಶ್ವತ ರೀತಿಯ ಪರಿಹಾರ. ವೆಚ್ಚ ಅಧಿಕ, ಆದರೂ ಕ್ರಮೇಣ ಲಾಭದಾಯಕ. ಬಿದ್ದ ಅಲ್ಪ ಪರಿಮಾಣದ ಮಳೆಯ ನೀರನ್ನು ಪೋಲಾಗದಂತೆ ಮಣ್ಣಿನಲ್ಲೇ ಉಳಿಸಿಕೊಂಡು ವಿಮೋಚನೆಯಿಂದ ಸೂಕ್ತ ಬೆಳೆಗೆ ಬಳಸಿಕೊಳ್ಳುವುದು ಇನ್ನೊಂದು ಕ್ರಮ. ಬಿದ್ದ ಮಳೆ ನೀರು ಹರಿದು ಮುಂದೆ ಹೋಗದೆ ಮಣ್ಣಿನಲ್ಲೇ ಇಳಿಯುವಂತೆ ಅದರ ಹದವನ್ನು ಬೆಳೆಸಿ ಕಾಪಾಡಿಕೊಳ್ಳವುದು ಮೊದಲನೆಯ ಹಂತ. ಇದಾಗಬೇಕಾದರೆ ಇಳಿಜಾರನ್ನು ಕಡಿಮೆ ಮಾಡಿ ನೆಲವನ್ನು ಆದಷ್ಟು ಮಟ್ಟಸ ಮಾಡುವುದು ಅಗತ್ಯ. ಇಳಿಜಾರಿಗೆ ಅಡ್ಡವಾಗಿ ಸಮಪಾತಳಿ ಒಡ್ಡುಗಳ ನಿರ್ಮಾಣದಿಂದ ಮಣ್ಣು ಕೊಚ್ಚುವುದು ತಪ್ಪುವುದು. ನೀರು ಇಂಗಿ ಮಣ್ಣಿನಲ್ಲೇ ಉಳಿಯುತ್ತದೆ. ಆಳವಾದ ಉಳುಮೆ ಇದಕ್ಕೆ ಅತ್ಯಂತ ಸಹಕಾರಿ. ಖುಷ್ಕಿ ಬೇಸಾಯ ಜಯಪ್ರದವಾಗಬೇಕಾದರೆ ಗಮನಿಸಬೇಕಾದ ಇನ್ನೊಂದಂಶ ಇರುವ ಸ್ವಲ್ಪ ಮಣ್ಣಿನ ತೇವವನ್ನು ಬಳಸಿಕೊಂಡು ಶೀಘ್ರವಾಗಿ ಬೆಳೆದು ಫಲಕೊಡಬಲ್ಲ ಬೆಳೆ ತಳಿಗೆ ಚುನಾವಣೆ. ಸಾಮಾನ್ಯವಾಗಿ ಮಳೆ ಅಭಾವ ಪ್ರದೇಶಗಳಲ್ಲಿ ನೆಲಗಡಲೆ ಮತ್ತು ಕೇಸರಿ ಬೆಳೆ ಜನಪ್ರಿಯ. ಇವು ಆದ್ರ್ರತೆಯನ್ನು ಸಹಿಸಿ ತಕ್ಕಮಟ್ಟಿನ ಇಳುವರಿ ಕೊಡಬಲ್ಲವು. ಖುಷ್ಕಿ ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಕೊಟ್ಟರೆ ಲಾಭದಾಯಕ ಎಂದು ಕಂಡುಬಂದಿದೆ. ಅದರಲ್ಲೂ ರಂಜಕ ಗೊಬ್ಬರ ಧಾರಾಳವಾಗಿ ಕೊಟ್ಟು ಮಣ್ಣಿನಲ್ಲಿ ಅದರ ಅಂಶ ವೃದ್ಧಿ ಪಡಿಸಿದಾಗ ಅನೇಕ ರೀತಿಯ ಪ್ರಯೋಜನ ಕಂಡು ಬಂದಿದೆ. ಸಸ್ಯದ ಬೇರು ಚೆನ್ನಾಗಿ ಬೆಳೆಯುತ್ತದೆ; ದ್ವಿದಳದ ಬೆಳೆ ಇಂಥ ಮಣ್ಣಿನಲ್ಲಿ ಬೆಳೆದಾಗ ವಾಯುವಿನಲ್ಲಿನ ಸಾರಜನಕ ಹೆಚ್ಚು ಪರಿಮಾಣದಲ್ಲಿ ಶೇಖರಣೆಯಾಗುತ್ತದೆ. ಈ ರೀತಿಯ ವಿವಿಧ ಮುಖ ಕ್ರಮಗಳನ್ನು ಒಟ್ಟುಗೂಡಿಸಿ ಕಾರ್ಯಕ್ರಮವನ್ನು ಅಳವಡಿಸಿ ಖುಷ್ಕಿ ಬೇಸಾಯದಲ್ಲಿನ ಮಳೆ ಅನಿಶ್ಚಿತತೆಯನ್ನು ಬಹುವಾಗಿ ನಿವಾರಿಸಬಹುದು. == ಉಲ್ಲೇಖಗಳು ==